ಕಲಾವಿದರೇ ಇಲ್ಲದ ಸಿನಿಮಾ “ವಿ-“

ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗಗಳಿಗೆ ಕೊರತೆಯೇನಿಲ್ಲ. ಆಗಾಗ ಹಲವಾರು ವಿಭಿನ್ನ ಶೈಲಿಯ ಹಾಗೂ ನಾವೀನ್ಯತೆಯುಳ್ಳ ಸಿನಿಮಾಗಳನ್ನು ಈಗಿನ ಯುವ ಪ್ರತಿಭೆಗಳು ಮಾಡುತ್ತಿದ್ದಾರೆ. ಕರ್ವ, ಯೂಟರ್ನ್, ಗೋಧಿಬಣ್ಣದಂಥ ಚಲನಚಿತ್ರಗಳು ಸ್ಯಾಂಡಲ್‍ವುಡ್‍ನ ಹೊಸತನದ ಅಲೆಯಲ್ಲಿ ಬಂದಂಥವುಗಳಾಗಿವೆ. ಈಗ ಮತ್ತೊಂದು ಸಿನಿಮಾ ಅದೆಲ್ಲ ಸಿನಿಮಾಗಳಿಗಿಂತ ವಿಭಿನ್ನವಾಗಿ ಮೂಡಿಬರುತ್ತಿದೆ.

v cinema presmeet

ಶ್ರೀರಾಮ್‍ಬಾಬು ಎಂಬ ಹೊಸ ಪ್ರತಿಭೆ ಅಂಥಾ ಪ್ರಯೋಗವನ್ನು ಮಾಡಿದ್ದಾರೆ. ಅದೇನೆಂದರೆ ಇಡೀ ಸಿನಿಮಾದಲ್ಲಿ ಯಾವುದೇ ಕಲಾವಿದರು ವೀಕ್ಷಕರಿಗೆ ಕಾಣಸುವುದಿಲ್ಲ. ಕೇವಲ ಸಂಭಾಷಣೆಗಳು ಹಾಗೂ ದೃಷ್ಯಗಳ ಮೂಲಕ ಕಥೆಯನ್ನು ಹೇಳಿಕೊಂಡು ಹೋಗುವ ಹೊಸ ಪ್ರಯತ್ನ ಮಾಡಲಾಗಿದೆ. ಅವರ ಈ ವಿಭಿನ್ನ ಪ್ರಯತ್ನಕ್ಕೆ ಗೆಳೆಯ ಶಿವಕುಮಾರ್ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಈವರೆಗೆ ಮಾತುಗಳೇ ಇಲ್ಲದ, ಅಥವಾ ಕೇವಲ ಒಂದು ಹಾಗೂ ಎರಡೇ ಪಾತ್ರಗಳ ಮೂಲಕ ಸಿನಿಮಾವನ್ನು ನಿರೂಪಿಸುವ ಪ್ರಯತ್ನ ನಡೆದಿತ್ತು. ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ನಿರ್ದೇಶಕ ಶ್ರೀರಾಮ ಯಾವುದೇ ಕಲಾವಿದರನ್ನು ಬಳಸಿಕೊಳ್ಳದೇ ಸಿನಿಮಾವೊಂದನ್ನು ಮಾಡಿದ್ದಾರೆ. ‘ವಿ-’ ಎಂಬ ಹೆಸರಿನ ಈ ಚಿತ್ರದ ಟೀಸರ್ ಅನಾವರಣ ಸಮಾರಂಭ ಮೊನ್ನೆ ನಡೆಯಿತು.

v banner

ಅತೃಪ್ತ ಆತ್ಮಗಳ ಕಥೆ ?

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ್ 3 ವರ್ಷಗಳಿಂದ ಶ್ರಮಪಟ್ಟು ಈ ಸ್ಕ್ರಿಪ್ಟ್ ಮಾಡಿದ್ದೇನೆ. ಗೆಳೆಯ ಶಿವಕುಮಾರ್ ಕಥೆ ಹಾಗೂ ನನ್ನ ಪ್ರಯತ್ನದ ಮೇಲೆ ನಂಬಿಕೆಯನ್ನಿಟ್ಟು ಬಂಡವಾಳ ಹಾಕಿದ್ದಾರೆ. ಅತೃಪ್ತ ಆತ್ಮಗಳ ಕಥೆಯಿದು. ಇಡೀ ಸಿನಿಮಾದಲ್ಲಿ ಕಲಾವಿದರ ಮುಖ ಕಾಣಿಸುವುದಿಲ್ಲ. ತೀರ ಅಗತ್ಯವೆನಿಸುವ ಕಡೆ ಮಾತ್ರ ನೆರಳಿನ ಮೂಲಕ ಪಾತ್ರಗಳನ್ನು ನಿರೂಪಿಸಲಾಗಿದೆ. ಒಂದು ಹಳ್ಳಿ, ಕಾಲೇಜು ಹಾಗೂ ಸ್ಮಶಾನದಲ್ಲಿ ಈ ಕಥೆ ನಡೆಯುತ್ತದೆ. ಇಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್ ತುಂಬ ಪ್ರಮುಖ ಪಾತ್ರ ವಹಿಸಿದ್ದು 80% ಸಿನಿಮಾದಲ್ಲಿ ಸಿ.ಜಿ. ವರ್ಕ್ ಬಳಸಿಕೊಳ್ಳಲಾಗಿದೆ. ಹೊಸಬರಾದ ನಮ್ಮನ್ನು ನಾವು ಗುರ್ತಿಸಿಕೊಳ್ಳುವ ಪ್ರಯತ್ನವಾಗಿ ಈ ಸಿನಿಮಾ ಮಾಡಿದ್ದೇವೆ. ಪಾತ್ರಗಳು ಕಣ್ಣಿಗೆ ಕಾಣಿಸದಿದ್ದರೂ ಸಿನಿಮಾ ನೋಡುಗರಿಗೆ ಅರ್ಥ ಆಗುತ್ತದೆ. ಸುಮಾರು 2 ಗಂಟೆಗಳ ಅವಧಿಯ ಈ ಚಿತ್ರದಲ್ಲಿ 2 ಹಾಡುಗಳು ಕೂಡ ಇರಲಿವೆ. ಬಳ್ಳಾರಿ, ಪಾವಗಡದಂಥ ಒಣತಾಪಮಾನದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಿದ್ದೇವೆ. ಈಗಾಗಲೇ ಸಿನಿಮಾದ ಶೂಟಿಂಗ್ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಈ ಸಿನಿಮಾ ರಿಲೀಸ್ ಮಾಡಿದ ನಂತರ ಕಲಾವಿದರನ್ನು ಬಳಸಿಕೊಂಡು ಮತ್ತೊಮ್ಮೆ ಶೂಟ್ ಮಾಡುವ ಪ್ಲಾನ್ ಸಹ ಇದೆ ಎಂದು ಹೇಳಿಕೊಂಡರು.

v cinema team

ನಂತರ ಚಿತ್ರದ ನಿರ್ಮಾಪಕ ಶಿವಕುಮಾರ್ ಮಾತನಾಡಿ ಇದೊಂದು ಹೊಸ ಪ್ರಯೋಗ, ಕಲಾವಿದರನ್ನು ಬಳಸದೇ ಶೂಟ್ ಮಾಡುವ ಯೋಜನೆಯನ್ನು ಗೆಳೆಯ ಶ್ರೀರಾಮ್ ಹೇಳಿದರು. ಮೊದಲು ನಾನು ಒಪ್ಪಲಿಲ್ಲ. 6 ತಿಂಗಳ ನಂತರ ಹೊಸದಾಗಿರುತ್ತದೆ ಮಾಡೋಣ ಎಂದು ಒಪ್ಪಿಕೊಂಡೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ನವೆಂಬರ್ ಅಥವಾ ಡಿಸೆಂಬರ್‍ನಲ್ಲಿ ರಿಲೀಸ್ ಮಾಡುವ ಯೋಜನೆ ಇದೆ ಎಂದು ಹೇಳಿದರು.

ಈ ಚಿತ್ರಕ್ಕೆ ಇಬ್ಬರು ಛಾಯಾಗ್ರಾಹಕರು ಕಾರ್ಯನಿರ್ವಹಿಸಿದ್ದಾರೆ. ರಾಜು ಹಾಗೂ ಮಂಜೇಶ ಎಂಬ ಹೊಸ ಪ್ರತಿಭೆಗಳು ಇಡೀ ಚಿತ್ರವನ್ನು ಅದ್ಬುತವಾಗಿ ತೆರೆಮೇಲೆ ಮೂಡಿಸಿದ್ದಾರೆ. ಈ ಸಿನಿಮಾದಲ್ಲಿ ಒಂದು ಮರ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಒಂದು ಹಳ್ಳಿ, ಕಾಲೇಜು ಹಾಗೂ ಸ್ಮಶಾನ ಈ 3 ಲೊಕೇಶನ್‍ಗಳಲ್ಲಿ ಇದೇ ಸಿನಿಮಾದ ಕಥೆ ನಡೆಯುತ್ತದೆ. ಚಿತ್ರದ 2 ಹಾಡುಗಳಿಗೆ ಸಿರಾಜ ಮಿಜಾರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಭಾರತದ ಎಲ್ಲಾ ಭಾಷೆಗಳಿಗೆ ಈ ಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡಲಾಗುವುದು ಎಂಬುದಾಗಿಯೂ ನಿರ್ದೇಶಕ ಶ್ರೀರಾಮ ಹೇಳಿದರು. ಪತ್ರಕರ್ತ ಗಿರೀಶ ಅಕ್ಕಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

-Ad-

Leave Your Comments