ವೀಕೆಂಡ್ ವಿತ್ ‘ಸುಂದರಾಂಗ ಜಾಣ’ ರಮೇಶ್ !!

ಶುಕ್ರವಾರವೆಂದರೆ ಸಿನಿಮಾ ದಿನ. ನನ್ನ ಸಿನಿಮಾ ಗೆದ್ದೇ ಗೆಲ್ಲುತ್ತೆ..” “ಅಯ್ಯೋ..ಮೊದಲನೇ ಸಿನಿಮಾ ಏನಾಗುತ್ತೋ  ಏನೋ?” “ಹೇಯ್ ನಮಗೆ ಆಡಿಯನ್ಸ್ ಪಲ್ಸ್ ಗೊತ್ತು ಬಿಡ್ರಿ ನಮ್ ಹೀರೋಗೆ ಒಳ್ಳೆ ಮಾರ್ಕೆಟ್ ಇದೆ ಜನ ಬಂದೆ ಬರ್ತಾರೆ ನೋಡ್ತಾ ಇರಿ ಹೌಸ್ ಫುಲ್!” ಹೀಗೆ ಥರಹೇವಾರಿ ಆತಂಕ, ಅಹಂ,ಆತ್ಮವಿಶ್ವಾಸದ ಮಾತುಗಳಿಗೆ ತೆರೆಬಿದ್ದು ಶುಭ-ಅಶುಭದ  ಮುನ್ಸೂಚನೆ  ತೋರುವ ದಿನ ಶುಕ್ರವಾರ. ಕೆಲವೊಮ್ಮೆ ಲೆಕ್ಕಾಚಾರಗಳು ಪಲ್ಟಿ ಹೊಡೆದು ಶುರುವಿನಲ್ಲಿ ಸೋತಂತೆ ಕಂಡರೂ ದಿನಸರಿದಂತೆ ಗೆದ್ದು ಬೀಗಿದವರೂ ಉಂಟು. ಇದೆಲ್ಲದರ ಮಧ್ಯೆ ನಟನೆ- ನಿರ್ದೇಶನ ಎರಡನ್ನೂ ಪ್ರೀತಿಸುವ, ಸಮತೂಕದ ಸಂಭಾವಿತ ಎನಿಸಿಕೊಂಡಿರುವ ರಮೇಶ್ ಅರವಿಂದ್ ಸಾರಥ್ಯದ “ಸುಂದರಾಂಗ ಜಾಣ” ನಾಳೆ ತೆರೆಗೆ ಬರುತ್ತಿದೆ.

sundaranga-jaana ಸುಂದರ ಸ್ವಪ್ನಗಳು ಚಿತ್ರದಿಂದ ಇಲ್ಲಿಯತನಕ ರಮೇಶ್ ಅಭಿನಯಿಸಿದ ಬಹುತೇಕ ಎಲ್ಲಾ ಚಿತ್ರಗಳು ಸದಭಿರುಚಿಯನ್ನೇ ಮೂಡಿಸಿವೆ. ರಾಮ-ಶಾಮ ಭಾಮಾ ನಿರ್ದೇಶನಕ್ಕೆ ಜನ ರೈಟ್ ಮಾರ್ಕ್ ಕೊಟ್ಟಿದ್ದಾರೆ. ಈಗ  “ಸುಂದರಾಂಗ ಜಾಣ”ನನ್ನ ಕೊಡುವ ಸಂಭ್ರಮದಲ್ಲಿದ್ದಾರೆ. ತೆರೆಯಲ್ಲಿ ಅರಳುವ ಮುನ್ನ  ciniadda.com ಜೊತೆ “ಸುಂದರಾಂಗ ಜಾಣ” ನ ಸುರುಳಿ ಬಿಚ್ಚಿದ್ದಾರೆ ಸೂತ್ರಧಾರ ರಮೇಶ್ ಅರವಿಂದ್.

 

ramesh-aravind-directing

ನಿಮ್ಮ ಪ್ರಕಾರ ಸುಂದರಾಂಗ ಜಾಣ ಏನು ?

ಸುಂದರಾಂಗ ಜಾಣ ನೆನಪಿನ ಶಕ್ತಿ ಕೊರತೆ, ಮರೆವಿನ ಸಮಸ್ಯೆ ಇರುವ ಲವ್ ಸ್ಟೋರಿ. ಹುಡುಗಿಯನ್ನ ಪ್ರೀತಿಸುವ ಹುಡುಗ ಆ ಹುಡುಗಿಯ ಹೆಸರನ್ನೇ ಮರೆತು ಬಿಡ್ತಾನೆ. ಹೀಗಾದ್ರೆ ಹೇಗಿರುತ್ತೆ ಸಂಬಂಧ? ಸನ್ನಿವೇಶ? ಸಿನಿಮಾ ನೋಡಿ ಗೊತ್ತಾಗುತ್ತೆ.

ರಿಮೇಕ್ ಸಿನಿಮಾನಾ ?

ಹೌದು. ರಿಮೇಕ್ ಅಂದ್ರೆ ಎರಡು ರೀತಿ . ಒಂದು ಯಥಾವತ್ತು. ಅಲ್ಲಿ ಹೇಗಿರತ್ತೋ ಹಾಗೇ ಭಟ್ಟಿ ಇಳಿಸುವುದು. ಮತ್ತೊಂದು ಕಥೆಯನ್ನ ಇಟ್ಟುಕೊಂಡು ನಿರ್ದೇಶಕನ ಸೃಜನಶೀಲತೆಗೆ ತಕ್ಕಂತೆ ಮರುಸೃಷ್ಟಿಸುವುದು. ನನ್ನ ಆಯ್ಕೆ ಎರಡನೆಯದ್ದು. ಹಾಗಂತ ನನಗೆ  ಬೇರೆಯವರ ದೃಷ್ಟಿ ಕೋನದ ಬಗ್ಗೆ ತಕರಾರಿಲ್ಲ. ನನ್ನ ಪ್ರಕಾರ ರಿಮೇಕ್ “ಕಥೆ”ಗೆ ಸಂಬಂಧ ಪಟ್ಟದ್ದು. ನಿರ್ದೇಶನಕ್ಕೆ ಸಂಬಂಧ ಪಟ್ಟ ವಿಷಯವಲ್ಲ. ಒರಿಜಿನಲ್ ಸ್ಕ್ರಿಪ್ಟ್ ತಂದು ಅದನ್ನ ನನ್ನ ಮನಸ್ಸಿನ ಆಳಕ್ಕಿಳಿಸಿಕೊಂಡಿದ್ದೇನೆ. ನಂತರ ಆ ಕಥೆ ಹೇಗೆ ತೋರಿಸಬೇಕು ಅನ್ನುವುದನ್ನು ನಿರ್ಧರಿಸಿ ಸಿನಿಮಾ ಮಾಡಿದ್ದೇನೆ. ಮೂಲ ಚಿತ್ರದಲ್ಲಿ ಹುಡುಗನಿಗೆ ಮರೆವಿನ ಸಮಸ್ಯೆ ಬಾಲ್ಯದಿಂದಲೇ ಇತ್ತು ಅಂತ ತೋರಿಸಲಿಕ್ಕೆ 3-4 ದೃಶ್ಯದ ಮೂಲಕ ತೋರಿಸುತ್ತಾರೆ. ನನಗೆ ಅದನ್ನ ಬೇರೆ ರೀತಿಯಲ್ಲಿ ತೋರಿಸಬೇಕು ಅಂತನ್ನಿಸಿತು ಮಾಡಿದ್ದೇನೆ. ಪ್ರತಿಯೊಂದು ದೃಶ್ಯದ ಸಾರಾಂಶ ತಿಳಿದು ನನ್ನ ಆಲೋಚನೆ ಬೆಸೆದು ಹೊಸೆದಿರುವ ಸಿನಿಮಾ ಸುಂದರಾಂಗ ಜಾಣ.

ಕನ್ನಡದಲ್ಲಿ ಕಥೆಗಳಿಗೆ ಕೊರತೆ ಇದೆಯೇ? ನಿಮ್ಮಂಥಾ ಓದಿನ ಹಿನ್ನೆಲೆಯವರು,ಸೂಕ್ಷ್ಮಜ್ಞರು  ರಿಮೇಕ್ ಗೆ ಇಳಿದಿದ್ದೇಕೆ ?

ramesh_aravind-thinking

ಕನ್ನಡ ಸಾಹಿತ್ಯದಲ್ಲಿ ಕಥೆಗಳೇನು ಬೇಕಾದಷ್ಟಿವೆ. ಅದೊಂದು ದೊಡ್ಡ ನಿಧಿ. ಆದರೆ ನಿರ್ದೇಶನ ಬೇರೊಂದು ಬಗೆಯದು. ನಿರ್ದೇಶನ ನನಗೆ ಖುಷಿ ಕೊಡುವ ವಿಷಯ. ಹತ್ತಾರು ಕಲಾವಿದರನ್ನ ಕರೆಸಿ ನೀವು ಹೇಗೆ ನಟಿಸಬೇಕು. ನಿಮ್ಮ ಸಂಭಾಷಣೆ ಹೀಗೇ.. ಬರಬೇಕು. ಇಂಥಾ ಉಡುಪನ್ನೇ ತೊಡಬೇಕು. ನಿಮ್ಮ ಎಕ್ಸ್ಪ್ರೆಷನ್ ಸರಿ ಬರ್ತಿಲ್ಲ ಇನ್ನು.. ಇನ್ನೂ… ಫೈನ್ ಟ್ಯೂನ್ ಆಗಿ ಬರಲಿ ಅಂತ ಹೇಳ್ತಾ ನಿರ್ದೇಶನ ಮಾಡುವುದರಲ್ಲಿ ಒಂದು ಮಜಾ ಇದೆ.

 

Jean-Luc Godard ಎಂಬಂಥ ಶ್ರೇಷ್ಠ ನಿರ್ದೇಶಕ, ವಿಮರ್ಶಕ ಹೇಳಿದ್ದಾನೆ ” ನೀನು ಎಲ್ಲಿಂದ ತಂದೆ ಎನ್ನುವುದು ಮುಖ್ಯವಲ್ಲ. ಎಲ್ಲಿಗೆ ತಲುಪಿಸುತ್ತಿಯೋ ಅದೇ ಮುಖ್ಯ”. ನಾನೂ ಇದನ್ನೇ ಅನುಸರಿಸಿದ್ದೇನೆ. ಸಿನಿಮಾ ನಿರ್ದೇಶನದಲ್ಲಿ ಒಂದು ಸೌಂದರ್ಯವಿದೆ. ಸುಖವಿದೆ. ಕಥೆ ಒಂದು ಭಾಗ ಮಾತ್ರ. ದೃಶ್ಯ ಕಟ್ಟುತ್ತಾ ಹೋಗುವುದು ಇದೆಲ್ಲವನ್ನೂ ಮೀರಿದ್ದು. ಯಾವ ಯಾವ ಬಣ್ಣ ಬಳಸುತ್ತೇವೆ, ಯಾರಿಗೆ ಯಾವ ಬಟ್ಟೆ, ಹೀಗೆ ಕಲರ್ ಕಟ್ಟುವ, ಪ್ರತಿ ಫ್ರೇಮ್ ಹೀಗೆಯೇ ಬರಬೇಕು ಎನ್ನುವ ಆಯ್ಕೆ ನಿರ್ದೇಶಕನದ್ದು. ಅಂಥಾ ಸ್ವಾತಂತ್ರ್ಯ ನನಗಿಲ್ಲಿ ಸಿಕ್ಕಿದೆ. ಯಾವ ರೀತಿಯ  ಸಂಗೀತ ಎಲ್ಲಿ ಹೇಗೆ ತರಬೇಕು ಎಲ್ಲಎಲ್ಲವು ಒಂದು ಸಂಭ್ರಮ. ಸುಂದರಾಂಗ ಜಾಣ ನೋಡಿ ನಿಮಗೇ  ಅದೆಲ್ಲ ಫೀಲ್ ಆಗತ್ತೆ.

ಒರಿಜಿನಲ್ ಮತ್ತು ರಿಮೇಕ್ ಚಿತ್ರದ ಮಧ್ಯೆ ಆಯ್ಕೆ ಮಾಡಿಕೊಳ್ಳುವ ಅವಕಾಶ ಇದ್ದರೆ ಖಂಡಿತವಾಗಿ ಒರಿಜಿನಲ್ ಸಿನಿಮಾವನ್ನೇ ಮಾಡಬೇಕು. ನನ್ನ ಆಯ್ಕೆ ಕೂಡ ಅದೇ. ಆದರೆ ಮತ್ತೊಂದು ಕಡೆಯಿಂದ ಒಳ್ಳೆ ಕಥೆ ಕಂಡಾಗ ಅದನ್ನೂ ಮಾಡಿ ತೋರಿಸಬೇಕು. ನಾನು ಎರಡನ್ನು ಮಾಡ್ತೀನಿ. ನಾನು ನಟನೆ ಮಾಡಿದಂತೆ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮವನ್ನೂ ಮಾಡಿದ್ದೇನೆ. ಡೈರೆಕ್ಷನ್ ಮಾಡಿದ್ದೇನೆ. ಎಲ್ಲರು ನೋಡಿದ್ದಾರೆ. ಬಹುಮುಖ ಅನ್ನುವುದಕ್ಕಿಂತ ಸಾಧ್ಯತೆಗಳ ವಿಸ್ತರಣೆ!

ಈ ಚಿತ್ರ ಸೂಪರ್ ಹಿಟ್ ಆಗಿರುವಂಥಾದ್ದು ಕನ್ನಡಕ್ಕೆ ನಾನು  ತರಬಲ್ಲೆ  ಅಂತ ನಂಬಿ ನಿರ್ದೇಶನದ ಜವಾಬ್ದಾರಿ ಕೊಟ್ಟಿದ್ದಾರೆ. ಕೆಲಸ ಮಾಡಿದ್ದೇನೆ. ನೋಡಿ. ನೋಡಿದ ಮೇಲೆ ಹೇಳಿ.

ನೀವೊಬ್ಬ ಒಳ್ಳೆ ನಟ .ಬೆಳ್ಳಿ ಮೋಡಗಳು, ಪಂಚಮವೇದ , ಅಮೃತ ವರ್ಷಿಣಿ ಇನ್ನು ಅನೇಕ ಚಿತ್ರಗಳಲ್ಲಿ  ಅದ್ಭುತ ಎನಿಸಿದವರು. ನಿರ್ದೇಶನ ಮಾಡುವಾಗ ನಿಮ್ಮೊಳಗಿನ ನಟ ಪಾತ್ರ ಕೇಳಲಿಲ್ಲವೇ ?

ramesh-ganesh

ಆ ಪಾತ್ರ ನನಗೆ ಸೂಟ್ ಆಗ್ತಿತ್ತು ನಿಜ. ವಿನೋದಮಯವಾದ ಪಾತ್ರ. ಆದರೆ ಅದಕ್ಕೆ ಹೆಚ್ಚುಸೂಕ್ತ ಗಣೇಶ್ ವಯಸ್ಸು. ಚಿಕ್ಕ ಹುಡುಗ ಬೇಕಿತ್ತು.

ರೋಮ್ಯಾಂಟಿಕ್ ಕಾಮಿಡಿ ಸಿನಿಮಾ ಸುಂದರಾಂಗ ಜಾಣ. ನಿಮ್ಮ ಸೌಂದರ್ಯವೂ ಮಾಸಿಲ್ಲ. ನಟನೆಯಲ್ಲೂ ಕಮ್ಮಿ ಇಲ್ಲ ನೀವೇ ಮಾಡಬಹುದಿತ್ತಾ ?

ramesh-aravind-new-stills-_2_

 

ನನ್ನ   ಹತ್ತಿರ ಬರುವಷ್ಟರಲ್ಲಿ ಗಣೇಶ್ ಗೆ ಪಾತ್ರ ಫಿಕ್ಸ್ ಆಗಿತ್ತು. ರಾಕ್ಲೈನ್ -ಗಣೇಶ್ ಸಿನಿಮಾ ಮಾಡುವ ನಿರ್ಧಾರ ಮಾಡಿದ ಮೇಲೆ ನನ್ನ ಬಳಿ ಬಂದದ್ದು. ಅದೇನೇ ಇರಲಿ. ಗಣೇಶ್ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಅವರು ಒಳ್ಳೆಯ ನಟ. ನಾನು ಸುಂದರಾಂಗಜಾಣ ದಲ್ಲಿ ಒಂದು ಸಣ್ಣ ಗೆಸ್ಟ್ ರೋಲ್ ಮಾಡಿದ್ದೇನೆ.

ganesh-rocklineಕನ್ನಡ ಚಿತ್ರರಂಗದಲ್ಲಿ ನಾಯಕ ನಟರು ಮಾತ್ರ ಇಲ್ಲಿನವರೇ ಇರುವಾಗ ಆಮದು ನಟಿಯರು ಯಾಕೆ ? ಇಲ್ಲಿ ಶಾನ್ವಿ ಕೂಡ ಹೊರಗಿನವರೇ. ಯಾಕೆ ಹೀಗೆ ?

ganesh-shanvi

ನಮ್ಮಲ್ಲಿ ಪ್ರತಿಭೆಗೆ ಖಂಡಿತ ಕೊರತೆ ಇಲ್ಲ. ಗಾಯನ, ನಟನೆ,ನೃತ್ಯ ಎಲ್ಲದರಲ್ಲೂ ಪ್ರತಿಭಾವಂತರಿದ್ದಾರೆ. ಸಿನಿಮಾ ಶೂಟಿಂಗ್ ಹೊತ್ತಲ್ಲಿ ಅವರ ಸಮಯ ಹೊಂದಾಣಿಕೆ ಆಗಬೇಕು. ಅವರಿಗೆ ಮಾರ್ಕೆಟ್ ಇರಬೇಕು. ಹೀಗೆ ಬೇರೆ ಬೇರೆ ಲೆಕ್ಕಾಚಾರಗಳಿವೆ. ಸುಂದರಾಂಗ ಜಾಣದಲ್ಲಿ ನಾಲ್ಕು ಹೊಸ ಪ್ರತಿಭೆಗಳನ್ನ ಪರಿಚಯಿಸಿದ್ದೇನೆ. ಒಬ್ಬರು ದೇವಸ್ಥಾನದಲ್ಲಿ ಪೂಜಾರಿಯಾಗಿದ್ದವ್ರು ಇಲ್ಲಿ ಸ್ಕ್ರಿಪ್ಟ್ ಬರೆದಿದ್ದಾರೆ. ಮತ್ತೊಬ್ಬ ಪ್ರದ್ಯುಮ್ನ ಹೊಸ ನಟ. ಅನುಭವಿ ಕಲಾವಿದರ ಜೊತೆ ಹೊಸಬರನ್ನೂ  ಸೇರಿಸಿ ಸಿನಿಮಾ ಮಾಡಿದ್ದೇನೆ.

ಹಿಂದೆಲ್ಲ ನರಸಿಂಹರಾಜು, ಬಾಲಕೃಷ್ಣ ಸಿನಿಮಾಗಳ ಹಾಸ್ಯದಲ್ಲಿ ಅಶ್ಲೀಲತೆ ಇರಲಿಲ್ಲ. ಮನೆಮಂದಿಯೆಲ್ಲ ನೋಡಬಹುದಿತ್ತು. ನಿಮ್ಮ ಈ ಕಾಮಿಡಿ- ರೋಮ್ಯಾಂಟಿಕ್ ಸುಂದರಾಂಗಜಾಣ ಎಲ್ಲರೂ ನೋಡಬಹುದೇ?

ಎಲ್ಲರೂ ಅಂದ್ರೆ ಸಣ್ಣ ಮಕ್ಕಳಿಂದ ಹಿಡಿದು ಮನೆಯಲ್ಲಿರುವ ಅಜ್ಜ-ಅಜ್ಜಿ ಆರಾಮ ಕೂತು ನಗ್ತಾ ನಗ್ತಾ ನೋಡಬಹುದು. ಇದು ನೂರಕ್ಕೆ ನೂರು ಸತ್ಯ. ಗಣೇಶ್ ,ಶಾನ್ವಿ ಜೊತೆಗೆ ರಂಗಾಯಣ ರಘು, ರವಿಶಂಕರ್ ಗೌಡ ಹೀಗೆ  ಬಹಳ ಅದ್ಭುತವಾದ ಕ್ಯಾರೆಕ್ಟರ್ಗಳಿವೆ. ಡಬಲ್ ಮೀನಿಂಗ್ ಕಿರಿಕಿರಿ ಇಲ್ಲ. 

ಈಗಂತೂ ಬ್ಲಾಕ್ ಮನಿನ ವೈಟ್ ಮಾಡಿಕೊಳ್ಳೋದು, ಕೆಲಸ ಒತ್ತಡ , ಜಂಜಾಟ ಅಂತೆಲ್ಲ ತಲೆ ಕೆಡಿಸಿಕೊಂಡಿರ್ತೀರಿ. ಅದೆಲ್ಲ ಪಕ್ಕಕ್ಕಿಟ್ಟು ನಿಮ್ಮಲ್ಲಿರುವ ಬ್ಲಾಕ್ ಭಾವನೆಗಳು, ನೋವುಗಳು ಎಲ್ಲವನ್ನು ಬಿಳಿಯ ಭಾವನೆಗಳಾಗಿ, ನಗುವಾಗಿ,ಸಂತೋಷವಾಗಿ ಬದಲಿಸಲು ಸುಂದರಾಂಗಜಾಣ ನೋಡಿ.

ಸಾಮಾನ್ಯವಾಗಿ ಸಿನಿಮಾ ಮಾಡಿದವರೆಲ್ಲ ನಮ್ಮದು ಸಕತ್ ಒಳ್ಳೆ ಸಿನಿಮಾ ಕಂಪ್ಲೀಟ್ ಫ್ಯಾಮಿಲಿ ಸಿನಿಮಾ ಅಂತಾನೆ ಹೇಳಿ ಪ್ರೇಕ್ಷಕನನ್ನ ಪುಸಲಾಯಿಸಿ ಥಿಯೇಟರ್ಗೆ ಕರೆಯುವುದುಂಟು. ಹೋದಮೇಲೆ ಗೊತ್ತಾಗೋದು ಇದು ಫ್ಯಾಮಿಲಿ ಅಲ್ಲ ಒಬ್ಬರೇ ಕೂತು ನೋಡಲಿಕ್ಕೂ  ಲಾಯಕ್ಕಲ್ಲದ ಸಿನಿಮಾ ಅಂತ. ಆದರೆ ರಮೇಶ್ ಅರವಿಂದ್  ಕನ್ನಡ ಚಿತ್ರರಂಗದ ಸುಸಂಸ್ಕೃತ ನಟ, ಸೂಕ್ಷ್ಮಮತಿ ಎನಿಸಿಕೊಂಡವರು. ನಮ್ಮ ಹಣ, ಸಮಯ ವ್ಯರ್ಥ  ಮಾಡಲಾರರು ಎಂಬ ಭರವಸೆಯಿಂದ “ಸುಂದರಾಂಗ ಜಾಣ ” ಹೇಗಿದ್ದಾನೋ  ನೋಡೋಣ.

-ಭಾನುಮತಿ ಬಿ ಸಿ

whatsapp-image-2016-12-21-at-8-01-33-pm

 

 

 

 

 

 

 

 

 

 

 

-Ad-

1 COMMENT

Leave Your Comments