ನಗುತಾ ನಗುತಾ ಬಾಳೂ ನೀನು ಯಶೋವಂತ ..

ಕನಸುಕಂಗಳ ಚೆಲುವ  ಕನ್ನಡ ಚಿತ್ರರಂಗದ ಯುವರಾಜನಂತೆ ಕಾಣುವ ಯಶ್ ಗೆ ಹುಟ್ಟು ಹಬ್ಬದ ಸಂಭ್ರಮ. ಸಾಧಿಸುವ ಛಲ ಹೊತ್ತ ಮನಸ್ಸಿಗೆ ಪ್ರತಿ ಹುಟ್ಟು ಹಬ್ಬ ಬಂದಾಗಲೂ ಒಮ್ಮೆ ಹಿಂತಿರುಗಿ ನಾನೇನು ಸಾಧಿಸಿದೆ ಎಂದು ನೋಡುವಂತಾಗುತ್ತದೆ. ತನ್ನನು ತಾನು ನೋಡಿಕೊಂಡು ಮುಂದೆ ಮುಂದೆ ನಡೆದು ಬರುತ್ತಿರುವ ಸಾಧಕ ಯಶ್ . ಹಾಗೇ ಒಮ್ಮೆ ತಿರುಗಿ ನೋಡಿದರೆ ಈತ ಅಪರಿಮಿತ ಶ್ರದ್ಧೆಯ ಶಕ್ತಿಯಿಂದ ಬೆಳೆದ ಕಲಾವಿದ ಅನ್ನುವುದು ಢಾಳಾಗಿ ಕಾಣುತ್ತದೆ. ಆತನ ಸುಸ್ಪಷ್ಟ ಕನ್ನಡ ಭಾಷೆ ಕೇಳಲೂ ಬಲು ಚೆನ್ನ.  ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗಿನ  ಬಹುತೇಕ ಎಲ್ಲ ನಟರ ಭಾಷೆಗೆ ಹೋಲಿಸಿದರೆ ಈತನದು ಇಷ್ಟವಾಗುವ ಸುಲಲಿತ ನುಡಿ.

yash3

ಅಪ್ಪ- ಅಮ್ಮ ತೋರಿದ ದಾರಿಯಲ್ಲಿ ನಡೆಯದೆ ತನ್ನ ಬದುಕಿನ ದೋಣಿಗೆ ತಾನೇ ಹುಟ್ಟುಗೋಲು ಹಾಕಿ ದಿಕ್ಕು ಕಂಡುಕೊಂಡ ನವೀನ  ಇವತ್ತಿನ ಯಶೋವಂತನಾಗಿದ್ದು ನಿರಂತರ ಅಭ್ಯಾಸ ಬಲದಿಂದ.

yash7

ರಂಗಭೂಮಿಯ ಅಡಿಪಾಯದ ಮೇಲೆ ಅಭಿನಯದಲ್ಲಿ ಸೌಧ ಕಟ್ಟುತ್ತಾ ಕಿರುತೆರೆಯಿಂದ ಬೆಳ್ಳಿತೆರೆಗೆ ಜಿಗಿಜಿಗಿದು ಬಂದ ಯಶ್ ತನ್ನ ಎರಡನೇ ಚಿತ್ರದ ಅಭಿನಯಕ್ಕೇ ಫಿಲಂ ಫೇರ್ ಪ್ರಶಸ್ತಿ ತೆಗೆದುಕೊಂಡು ಭರವಸೆ ಮೂಡಿಸಿದಾತ. ತೆರೆಯ ಮೇಲೆ ಆತನ ಮಾತಿನ ಲವಲವಿಕೆ, ಹಾವಭಾವ ನೋಡಿದಷ್ಟೂ ಚೇತೋಹಾರಿ. ಇತ್ತೀಚೆಗೆ ಬಂದ ಸಂತು straight ಫಾರ್ವರ್ಡ್  ನ ಹಲವು ಆರ್ಭಟ ಹೊರತು ಪಡಿಸಿದರೆ ಮತ್ತೆ ಮತ್ತೆ ನೋಡಬೇಕಿನಿಸುವಷ್ಟು ಹಿತವಾದ ಅಭಿನಯ ಈ ಚೆಲುವನದ್ದು. ಆತನ ಆತ್ಮವಿಶ್ವಾಸ ಕೆಲವೊಮ್ಮೆ ಅಹಂಕಾರದಂತೆ ಕಂಡಿದ್ದೂ ನಿಜ.

yash8yash4

ತನ್ನ ಬದುಕು ಹೇಗಿರಬೇಕು ಎಂದು ನಿರ್ಧರಿಸಿ ಅದಕ್ಕೆ ಬೇಕಾದ ಎಲ್ಲವನ್ನು ತನ್ನ ಸ್ವಂತ ಶಕ್ತಿಯಿಂದ ಪಡೆದುಕೊಳ್ಳುವ ಹಲವರಿಗೆ ಇಂಥಾ ಅಹಂ ತುಸು ಹೆಚ್ಛೇ ಕಾಣುವುದುಂಟು. ಅದಕ್ಕೆ ವಯಸ್ಸೂ ಕಾರಣವಿರಬಹುದು. ಹಾಗೆಂದ ಮಾತ್ರಕ್ಕೆ ವಿನಯವಂತಿಕೆ ಬೆಳೆಸಿಕೊಳ್ಳಬಾರದೆಂದಲ್ಲ. ಅದು ಅವರವರ ತಿಳಿವಿಗೆ ಬಿಟ್ಟ ವಿಚಾರ. ಅವಕಾಶಗಳಿಗಾಗಿ ಅಲೆದು ಕೊನೆಗೂ ಅಪ್ರತಿಮ ನಟನಾದ ಪ್ರಕಾಶ್ ರೈಗೆ ಇವತ್ತಿಗೂ ರಾಜ್ಕುಮಾರ್ ಅವರಿಗಿದ್ದ ವಿನಯ, ವಿಧೇಯತೆಯ ತುಣುಕೂ ತಾಕಿಲ್ಲ. ಯಶ್ ತನ್ನ ಸುತ್ತ ನಡೆಯುವ ಸಂಗತಿಗಳ ಬಗ್ಗೆ ಗಮನಿಸುವ ಎಚ್ಚರದ ಕಣ್ಣಿನ ಹುಡುಗ. ಸಮಾಜದ ಬಗ್ಗೆ ಕಾಳಜಿ ಮಾತಿನಲ್ಲಷ್ಟೇ ಉಳಿಯದೆ  “ಯಶೋ ಮಾರ್ಗ”ದ ಮೂಲಕ ಕೆಲಸವನ್ನು ಮಾಡುತ್ತಿದ್ದಾರೆ. ವೃತ್ತಿ ಬದುಕಿನ ಜೊತೆಗಾತಿಯನ್ನು ಸಂಗಾತಿಯಾಗಿ ವರಿಸಿ ಬಾಳಿನ ಮತ್ತೊಂದು ಮಜಲಿಗೂ ಅಡಿಯಿಟ್ಟಿದ್ದಾರೆ .

yash-5yash-santu

ಈ ಕಲಾವಿದನ  ಇಂದಿನವರೆಗಿನ ಬದುಕನ್ನು ಗಮನಿಸಿದಾಗ ಅನ್ನಿಸುವುದು ಈತ ಬಹುತೇಕ ಎಲ್ಲವನ್ನು ಶಿಸ್ತಿನಿಂದ  ನಿಭಾಯಿಸುವ ವ್ಯಕ್ತಿ. ಹುಟ್ಟು ಹಬ್ಬದ ಈ ಘಳಿಗೆಯಲ್ಲಿ  ಹಾರೈಸುವುದಿಷ್ಟು.ಈ ಕನಸುಗಾರನ ಆತ್ಮವಿಶ್ವಾಸದ ನಡಿಗೆ ಯಶಸ್ಸಿನ ಕಡೆಗೆ ಸಾಗುತ್ತಲೇ ಇರಲಿ. ಕನ್ನಡ ಸೀಮೆಗೂ ಮೀರಿ  ಅಪ್ರತಿಮ ನಟನಾಗಿ ಬೆಳೆಯಲಿ.

yash-photoyash-actor-new-stills-_4_

-Ad-

Leave Your Comments