ಹಾರಗಳು ಬೇಡ. ನಿಮ್ಮ ಹಾರೈಕೆ ತನ್ನಿ ಸಾಕು – ಯಶ್

ಯಶ್ -ರಾಧಿಕಾ ಪಂಡಿತ್ ಮದುವೆಗೆ ಇನ್ನೇನು ಎರಡೇ ದಿನ ಬಾಕಿ ಉಳಿದಿದೆ. ಯಶ್ ಎಲ್ಲ ಗಣ್ಯರ ಮನೆಗೆ ತೆರಳಿ ಆಹ್ವಾನ ಪತ್ರಿಕೆ ಕೊಡುತ್ತಿರುವ ಫೋಟೋ ನೋಡುವಾಗಲೆಲ್ಲ “ಅಣ್ತಮ್ಮ” ನಮ್ಮನ್ನ ಕರೆಯೋದಿಲ್ವೇ? ಅಂತ ಕೂತಲ್ಲೇ ಕೇಳಿಕೊಂಡ  ಅಭಿಮಾನಿಗಳಿಗೆ ಲೆಕ್ಕವಿಲ್ಲ. ನಾವು ನಿನ್ನ ಎಷ್ಟು ಪ್ರೀತಿಸ್ತೀವಿ ಗೊತ್ತಾ ಸಂತು? ನಾವು ಬೇಡ್ವಾ ನಿಂಗೆ ?? ಅಂತ ಕೊರಗುವ ಜೀವಗಳ ಕೂಗು ಕೇಳಿತೇನೋ ಅನ್ನುವ ಹಾಗೆ ಯಶ್ ಅಭಿಮಾನಿಗಳ ಬರುವಿಕೆಗೂ ತಯಾರಿ ಮಾಡಿಕೊಂಡಿದ್ದಾರೆ. ciniadda.com ಜೊತೆ ಯಶ್ ಮದುವೆಯ ಸಿದ್ದತೆಯ ಬಗ್ಗೆ ಮಾತಾಡಿದ್ದಾರೆ ಓದಿ . ಇದು ನಿಮಗಾಗಿ .

yash-raadhikaa

ಮದುವೆಗಾಗಿ ಎಲ್ಲ ಗಣ್ಯರನ್ನು ಆಹ್ವಾನಿಸಿದ್ದೀರಿ. ನಿಮ್ಮನ್ನು ಅಪಾರವಾಗಿ ಪ್ರೀತಿಸುವ ಅಭಿಮಾನಿಗಳನ್ನು ಕರೆಯುವುದಿಲ್ಲವೇ ?

ಅಭಿಮಾನಿಗಳ ಪ್ರೀತಿಗೆ ಯಾವತ್ತೂ ಋಣಿ. ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಪ್ರತಿಯೊಬ್ಬರನ್ನು ಹೇಗೆ ಹೋಗಿ ಕರೆಯಲಿ? ಅವ್ರಿಗೂ ಇದು ಅರ್ಥವಾಗುವ ವಿಷಯ. ನನ್ನನ್ನು ಮನೆಯ ಮಗನಂತೆ ಒಪ್ಪಿಕೊಂಡಿರುವ, ಪ್ರೋತ್ಸಾಹಿಸುವ ಜನ ಮದುವೆಗೆ ಬರಲೇಬೇಕು. ಮೊದಲೆರಡು ದಿನ ಕುಟುಂಬದವರು, ಚಿತ್ರರಂಗದ ಮಹನೀಯರು ಸೇರಿದಂತೆ ಹಲವು ಕ್ಷೇತ್ರದ ಗಣ್ಯರು ಬರ್ತಾರೆ. ಅವರ ಮಧ್ಯೆ ಅಭಿಮಾನಿಗಳು ಪರದಾಡುವುದು ಬೇಡ. ಅದಕ್ಕಾಗಿ ಅವರಿಗೋಸ್ಕರ ಅಂತಾನೆ ಮೂರನೆಯ ದಿನ ಅಂದ್ರೆ ಡಿಸೆಂಬರ್ 11 ನೆಯ ತಾರೀಕು ಆರತಕ್ಷತೆ ಇದೆ. ಎಲ್ಲರನ್ನು ಪ್ರೀತಿಯಿಂದ ಮದುವೆಗೆ ಈ ಮೂಲಕ ಆಹ್ವಾನಿಸುತ್ತಿದ್ದೇನೆ. 

ಪಾಸ್ ಇದೆಯಾ ? ಎಲ್ಲಿ ಕಲೆಕ್ಟ್ ಮಾಡಿಕೊಳ್ಳಬೇಕು ?

ಡಿಸೆಂಬರ್  11ಕ್ಕೆ ಯಾವ ಪಾಸ್ ಇಲ್ಲ. ಎಲ್ಲರಿಗು ಮುಕ್ತ.. 

ನಿಮ್ಮಿಬ್ಬರನ್ನು ಕಣ್ತುಂಬಿಕೊಳ್ಳುವುದಿಕ್ಕೆ ಎಷ್ಟು ಹೊತ್ತಿಗೆ ಬರಬಹುದು ?

ಡಿಸೆಂಬರ್ 11ರ ಬೆಳಿಗ್ಗೆ 11-30ರಿಂದ ಸಂಜೆ 5ಗಂಟೆಯವರೆಗೆ ಅರಮನೆ ಮೈದಾನದಲ್ಲಿರುವ ತ್ರಿಪುರವಾಸಿನಿಗೆ  ಯಾರು ಬೇಕಾದರೂ ಬರಬಹುದು. ಒಂದು ಪಂಕ್ತಿಗೆ 5 ರಿಂದ 6 ಸಾವಿರ ಜನಕ್ಕೆ ಬಾಳೆ ಎಲೆಯಲ್ಲಿ ಊಟ ಬಡಿಸುವ ವ್ಯವಸ್ಥೆ ಮಾಡಿದ್ದೇವೆ. ಸಂಜೆಯವರೆಗೂ ಭೋಜನವಿರುತ್ತೆ. 

ಅಭಿಮಾನಿಗಳು  ಸರದಿ ಸಾಲಿನಲ್ಲಿ ಬಂದು ವಿಶ್ ಮಾಡುವುದಕ್ಕೆ ಏನಾದ್ರೂ ವ್ಯವಸ್ಥೆ ಇದೆಯಾ ?

yash-images

 

ನಿಮಗೂ ಗೊತ್ತು ಅದು ಅಸಾಧ್ಯ.  ನಾವು ಅಲ್ಲೇ ಇರ್ತೀವಿ. ಬರ್ತ್ ಡೇ ಸಮಯದಲ್ಲಿ ಬ್ಯಾರಿಕೇಡ್ ಇರುತ್ತಲ್ಲ ಹಾಗೆ ಒಂದಿಷ್ಟು ಅಂತರವಿರುತ್ತಷ್ಟೆ. ಹೆಚ್ಚು ದೂರವಿರೋದಿಲ್ಲ. ಕಣ್ಣಳತೆಯಲ್ಲೇ  ಸಂಜೆವರೆಗೂ ಅವರ ಎದುರಿನಲ್ಲೇ ಇರ್ತೀವಿ.

ಅಭಿಮಾನಿಗಳು ಉಡುಗೊರೆ ಕೊಡ್ಬೇಕು, ಹಾರ ಹಾಕ್ಬೇಕು ಅನ್ನುವುದಾರೆ ?

yash-fansyashfans-1

ದಯವಿಟ್ಟು ಅಭಿಮಾನಿಗಳು  ಉಡುಗೊರೆ ಅಂತೆಲ್ಲ ಹಣ ಖರ್ಚು ಮಾಡಿಕೊಳ್ಳಬಾರದು. ಹಾರ ತರುವ ತೊಂದರೆ ತೆಗೆದುಕೊಳ್ಳಬಾರದು. ನೀವೆಲ್ಲ ಬಂದು (ಅಭಿಮಾನಿಗಳು) ಊಟ ಮಾಡ್ಕೊಂಡು  ಹೋದರೆ ಅಷ್ಟೇ ಸಾಕು. ಅದೇ ದೊಡ್ಡ ಉಡುಗೊರೆ . ಇದು ನನ್ನ ಮನವಿ. 

ಮೊನ್ನೆ ಮೊನ್ನೆಯಷ್ಟೇ ಯಶ್, ಐಷಾರಾಮಿ ಮದುವೆಗಳಿಗೆ ವಿಧಿಸಬಹುದಾದ ತೆರಿಗೆ ಬಗ್ಗೆ ಮಾತನಾಡ್ತಾ ದೊಡ್ಡ ದೊಡ್ಡ ಮದುವೆಗಳಲ್ಲಿ ಸಾಮಾನ್ಯವಾಗಿ ಹೆಚ್ಚಾಗುವ  ಕಸದ ಬಗ್ಗೆ ಮಾತಾಡಿದ್ರು . ಊಟ ವೇಸ್ಟ್  ಮಾಡದ ಹಾಗೆ , ಕಸ ಹೆಚ್ಚಾಗದ ಹಾಗೆ ನೋಡಿಕೊಳ್ಳಬೇಕು ಅಂದಿದ್ದರು. ಈಗ ಅವರ ಮದುವೆಗೆ ಬರುವ ಅಭಿಮಾನಿಗಳು ಹಾರ ತುರಾಯಿ ತರದಿದ್ದರೆ ಅದರಿಂದಾಗುವ ಕಸದ ರಾಶಿಯನ್ನು ತಡೆಗಟ್ಟಬಹುದು ಎಂಬ ಪ್ರಜ್ಞೆಯಿಂದ ಮನವಿ ಮಾಡಿದ್ದಾರೆ. ನೀವು ಸಹಕರಿಸುವಿರಲ್ಲ?

-ಭಾನುಮತಿ ಬಿ ಸಿ

 

 

 

 

-Ad-

Leave Your Comments