ಯಶ್-ರಾಧಿಕಾ ಪಂಡಿತ್ ಗೌಡರನ್ನು ಭೇಟಿ ಮಾಡಿದ್ಯಾಕೆ..? 

 ರಾಯಚೂರಿನ ಲಿಂಗಸೂರಿನಲ್ಲಿ ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಭೇಟಿ ಮಾಡಿದ್ರು. ಕೆಲ ಕಾಲ ನಟ ಯಶ್ ಹಾಗೂ ರಾಧಿಕಾ ಪಂಡಿತ್ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡರ ಜೊತೆ ಚರ್ಚೆ ನಡೆಸಿದ್ದು, ಅಭಿಮಾನಿಗಳು ಹಾಗೂ ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಮಾತುಗಳಿಗೆ ಎಡೆ ಮಾಡಿಕೊಟ್ಟಿದೆ. ಈಗಾಗಲೇ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಯಶ್ ದಂಪತಿ, ರೈತರ ಪಕ್ಷ ಜೆಡಿಎಸ್ ರಾಜಕೀಯ ಆರಂಭಿಸಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿವೆ.
ಅಧಿಕೃತ ಹೇಳಿಕೆ ಹೊರತು ಎಲ್ಲವೂ ಅಸತ್ಯ..!
ಲಿಂಗಸೂರು ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್ ಅವರ ಮಗನ ಮದುವೆ ಹಾಗೂ ಸಾಮೂಹಿಕ ಮದುವೆಯಲ್ಲಿ ಪಾಲ್ಗೊಳ್ಳಲು ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಬಂದಿದ್ದರು. ಈ ವೇಳೆ ಮದುವೆಯಲ್ಲಿ ಭಾಗಿಯಾಗಿದ್ದ ಮಾಜಿ ಪ್ರಧಾನಿ ದೇವೇಗೌಡರನ್ನು ಯಶ್ ದಂಪತಿ ಸಹಜವಾಗಿಯೇ ಮಾತನಾಡಿಸಿದ್ದಾರೆ. ಆದರೆ ಜೆಡಿಎಸ್ ಸೇರುತ್ತಾರೆ ಅನ್ನೋದರ ಬಗ್ಗೆ ಯಾವುದೇ ವಿಚಾರಗಳು ಚರ್ಚೆ ಆಗಿರುವ ಬಗ್ಗೆ ಅಧಿಕೃತ ಮಾಹಿತಿಯಿಲ್ಲ. ಸದ್ಯಕ್ಕೆ ಸ್ವತಃ ಯಶ್ ಮಾತನಾಡದೆ ಯಾವುದೂ ನಿಖರ ಎನ್ನಲಾಗುವುದಿಲ್ಲ.
ಯಶ್ ರಾಜಕೀಯ ಸೇರ್ಪಡೆ ವಿಚಾರ ಸುಳ್ಳಾ..?
ಸಿನಿಮಾ ನಟ ನಟಿಯರು ಚಿತ್ರರಂಗದ ಬದುಕು ಮುಗಿಸಿ‌ ಆಯ್ಕೆ ಮಾಡಿಕೊಳ್ಳುವ ಸುಲಭದ  ಹಾದಿ ಎಂದರೆ ಅದು ರಾಜಕೀಯ. ಪರೋಕ್ಷ ಅಥವಾ ನೇರ ರಾಜಕಾರಣದ ಮೂಲಕ ಮತ್ತೊಂದು ಬದುಕಿನ ಮಜಲಿಗೆ ತಮ್ಮನ್ನು ತಾವು ತೆರೆದುಕೊಳ್ಳುತ್ತಾರೆ. ಸಾಕಷ್ಟು ಸಿನಿಮಾ ನಟರು ನಾಮಕಾವಸ್ತೆ ರಾಜಕಾರಣಕ್ಕೆ ಸೀಮಿತರಾಗಿರುವುದು ನಮ್ಮ ಕಣ್ಣ ಮುಂದಿದೆ. ಆದರೆ ನಟ ಯಶ್ ಸ್ವಲ್ಪ ವಿಭಿನ್ನ ಅನ್ನೋದು ಈಗಾಗಲೇ ಕರುನಾಡಿನ ಜನತೆಗೆ ತಿಳಿದಿದೆ. ಕರ್ನಾಟಕದಲ್ಲಿ ಭೀಕರ ಬರಗಾಲ ಆವರಿಸಿದಾಗ ಯಾವ ನಟನೂ ಮಾಡದಂತಹ ಕೆಲಸಕ್ಕೆ ಕೈ ಹಾಕಿದರು, ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಯಶೋಮಾರ್ಗ ಎಂಬ ಸ್ವಯಂ ಸಂಸ್ಥೆ ಮೂಲಕ ನೀರು ಪೂರೈಕೆಗೆ ಆದ್ಯತೆ ಕೊಟ್ಟಿದ್ದಾರೆ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕೆರೆಯ ಹೂಳು ತೆಗೆಸಿದ್ದಾರೆ. ಇದೆಲ್ಲವೂ ರಾಜಕಾರಣಕ್ಕೆ ಧುಮುಕುವ ಮುನ್ಸೂಚನೆ ಎಂದೇ ಎಲ್ಲರೂ ಭಾವಿಸಿದ್ದಾರೆ. ಸಾರ್ವಜನಿಕರೂ ಕೂಡ ಅದೇ ರೀತಿ ಭಾವಿಸಿದ್ದಾರೆ. ಕಲಾವಿದನಾಗಿ ಅತ್ಯುನ್ನತ ಪಾತ್ರಗಳನ್ನು ಮಾಡಬೇಕೆಂದಿರುವ ಯಶ್ ಸದ್ಯಕ್ಕೆ ಯಾವುದೇ ಪಕ್ಷ ಸೇರುವ ಸುಳಿವಂತೂ ಇಲ್ಲ . ಮುಂದಿನ ನಡೆಗಳ ಬಗ್ಗೆ ಕಾಲವನ್ನೇ ಕಾಯಬೇಕಷ್ಟೇ.
ಜ್ಯೋತಿ ಗೌಡ, ನಾಗಮಂಗಲ
-Ad-

Leave Your Comments