ಬಂಗಾರದ ಮನುಷ್ಯನನ್ನು ನೆನಪಿಸುವ ಬರದ ನಾಡಿನ ಭಗೀರಥ ಯಶ್ !!

ಕನ್ನಡ ಚಿತ್ರರಂಗದ ಅಪ್ಪಟ ಪ್ರತಿಭಾವಂತ ಹೊಸ  ದಂಪತಿಗಳು ಅಂದ್ರೆ ಯಶ್ -ರಾಧಿಕಾ ಪಂಡಿತ್ . ಅವರಿಬ್ಬರಿಗೂ ಇದು ಮೊದಲ ಉಗಾದಿ ನಿಜ.  ಮನೆಯಲ್ಲೇ ಕುಟುಂಬ ಸಮೇತರಾಗಿ ಹಬ್ಬ ಆಚರಿಸಿಕೊಂಡು ಅಭಿಮಾನಿಗಳಿಗೆ ciniadda.com ಮೂಲಕವೂ ಶುಭಾಶಯ ತಿಳಿಸಿದ್ದಾರೆ.

ಯುಗಾದಿ ಹಬ್ಬ  ಯಶ್ ಪಾಲಿಗೆ ಅತ್ಯಂತ ಇಷ್ಟದ ಹಬ್ಬವಂತೆ. ಯಾಕಂದ್ರೆ ಬೇವುಬೆಲ್ಲ ಬದುಕಿನ ಸಿಹಿಕಹಿಗಳ ಹೂರಣವನ್ನು ಸಮನಾಗಿ ಸ್ವೀಕರಿಸುವ ರೀತಿಯನ್ನು ಕಲಿಸುತ್ತೆ ಅನ್ನೋದು ಅವರ ನಂಬಿಕೆ. ಇಷ್ಟೇ ಆಗಿದ್ರೆ  ನಾವೂ  ಒಂದು ಶುಭಾಶಯ ಹೇಳಿ ಸುಮ್ಮನಾಗಬಹುದಿತ್ತು. ಆದರೆ ಬಂಗಾರದ ಮನುಷ್ಯ ಚಿತ್ರದ  ಎಂಥವರಿಗೂ ಸ್ಪೂರ್ತಿಯಾಗುವ ಹಾಡನ್ನು  ನೆನಪಿಸುವ ಮಹತ್ಕಾರ್ಯ ಮಾಡಿದ್ದಾರೆ ಯಶ್.

“ಆಗದು ಎಂದು ಕೈಲಾಗದು ಎಂದು

ಕೈಕಟ್ಟಿ ಕುಳಿತರೆ ಸಾಗದು ಕೆಲಸವು  ಮುಂದೆ

ಮನಸೊಂದಿದ್ದರೆ ಮಾರ್ಗವು ಮುಂದೆ 

ಕೆಚ್ಚದೆ ಇರಬೇಕೆಂದೆಂದು..

ಅಧಿಕಾರಸ್ಥರು, ರಾಜಕಾರಣಿಗಳು ಕೈಚೆಲ್ಲಿ ಕೂತಿದ್ದ, ಕೊಪ್ಪಳದ  ತಲ್ಲೂರು  ಕೆರೆಯಲ್ಲಿ ಹೂಳು  ತೆಗೆಸಿ  ನೀರ ಸೆಲೆ ಚಿಮ್ಮಿಸಿದ್ದಾರೆ .  ಹನಿ ನೀರಿಗೂ ಹಾಹಾಕಾರ ಇರುವ  ಬರಡಾದ ಭೂಮಿಯಲ್ಲಿ ಮತ್ತೆ ಜೀವಸೆಲೆ ಹರಿದಿದೆ.

ಅಯ್ಯೋ ಬರ ಇದ್ದಿದ್ದೇ ಬಿಡ್ರಿ .ಕೆರೆಗಳೆಲ್ಲ ಒಣಗವೆ ಹೂಳೆತ್ತೋವ್ರು ಯಾರು ? ಸರ್ಕಾರ  ಮಾಡ್ಬೇಕು ನಾವೇನ್ ಮಾಡಣ ? ನಮ್ಮೊಬ್ಬರಿಂದ ಏನಾಗುತ್ತೆ ಬಿಡಿ ಅಂತ ಮಾಡಲೇಬೇಕಾದ ಕೆಲಸ ಸರಿಯಾಗಿ ಮಾಡದೆ ಕಂಡವರ ಕಡೆಗೆ ಬೆರಳು ತೋರಿಸಿ ಕೂತವರಿಗೆ ಮಾಡುವ ಮನಸ್ಸು , ಬದ್ಧತೆ ಇದ್ದರೆ ಕರಕಲಾದ ಭೂಮಿಯಲ್ಲೂ ಬಂಗಾರ ಬೆಳೆಯಬಹುದು ಅನ್ನುವುದನ್ನು ಯಶೋಮಾರ್ಗದ ಮೂಲಕ ಮಾಡಿ ತೋರುತ್ತಿದ್ದಾರೆ ಯಶ್ .

ಮತ್ತೆ ಬಂಗಾರದ ಮನುಷ್ಯ ನೆನಪಾಗುತ್ತಾನೆ “ನಿಮ್ಮ ಆಶೀರ್ವಾದ ಸಹಕಾರ ಇದ್ರೆ ಈ ಜಮೀನಿನಲ್ಲಿ ಏನ್ ಬೇಕಾದ್ರೂ ಬೆಳೀಬಹುದು ಅನ್ನೋ ನಂಬಿಕೆ ನನಗಿದೆ  ಇದೆ”. ಅಣ್ಣಾವ್ರು ತೆರೆಯ ಮೇಲೆ ನುಡಿದ ನುಡಿಯನ್ನ ಯಶ್ ನಿಜ ಜೀವನದಲ್ಲಿ ಜನರಿಗಾಗಿ ಮಾಡಿ ನಿಜಾರ್ಥದಲ್ಲಿ ಜನಮನದ ನಾಯಕನಾಗಿದ್ದಾರೆಂದರೆ ಸುಳ್ಳಲ್ಲ. ಸಾಧನೆ ಕಣ್ಣಮುಂದಿದೆ.

ಕೆರೆಯಂ ಕಟ್ಟಿಸು ಆಗರಮಂ ಮಾಡಿಸು ಅಂತ ಹಿಂದೆಲ್ಲ ತಾಯಂದಿರು ಮಕ್ಕಳನ್ನು ತೂಗುವಾಗ ಹೇಳುತ್ತಿದ್ದರಂತೆ. ತಾನೆತ್ತ ಮಗ ಜನೋಪಕಾರಿಯಾಗಲಿ ಎಂಬ ಉದಾತ್ತ ಆಶಯದಿಂದ. ತಲೆಮಾರು ಕಳೆದರು ನೆನಪಿಸಿಕೊಳ್ಳುವ, ಬದುಕನ್ನು ಹಸನಾಗಿಸುವ ಕೆಲಸವಿದು. ಯಶೋಮಾರ್ಗದಿಂದ ಮಾಡಿದ, ಮಾಡುತ್ತಿರುವ ನೀರ ಕಾಯಕಕ್ಕೆ ಅಹಮ್ಮಿನ ಕಿರೀಟ ತೊಡದೆ ಜನಸಮುದಾಯಕ್ಕೆ ಪ್ರೇರಣೆಯಾಗಿದ್ದಾರೆ . ಇದು ನನ್ನೊಬ್ಬನ ಸಾಧನೆ ಮಾತ್ರವಾಗಬಾರದು ಇಂಥಾ ಕೆಲಸಕ್ಕೆ ಪ್ರತಿಯೊಬ್ಬರೂ ಹಳ್ಳಿ -ನಗರಗಳಲ್ಲಿ ಮುಂದಾಗಬೇಕು . ಇದೊಂದು ಜನಾಂದೋಲನವಾಗಿ ಜನರಿಗೆ ಒಳಿತಾಗಬೇಕು. ಸಮುದಾಯ ಪ್ರಜ್ಞೆ ಎಲ್ಲರಲ್ಲೂ ಮೂಡಬೇಕು ಎನ್ನುವ ಯಶ್ ಅವರ ಕಳಕಳಿ ಶ್ಲಾಘನೀಯ.

 ರೈತರ,ಬಡವರ ಅದರಲ್ಲೂ ಕುಡಿಯುವ ನೀರಿಲ್ಲದೆ ಬದುಕು ಬರಡಾಗಿರುವ ಕೊಪ್ಪಳದ ತಲ್ಲೂರಿಗಂತೂ  ಯಶ್ ಭಗೀರಥ!!

ಯಶ್ ಸಾಧನೆಗೆ ciniadda.com ಓದುಗರ ಪರವಾಗಿ ಅಭಿನಂದನೆಗಳು.

 

-Ad-

Leave Your Comments