ಬಾಗಿನ ಅರ್ಪಿಸಿದ ಆಧುನಿಕ ಭಗೀರಥ ಯಶ್ !!

ಬತ್ತಿದ ಕೆರೆಗೆ ಭಗೀರಥನಾದ ಯಶ್ ,ಪತ್ನಿ ರಾಧಿಕಾ ಜೊತೆಗೂಡಿ ತಲ್ಲೂರು ಕೆರೆಗೆ ಬಾಗಿನ ಅರ್ಪಿಸಿದ್ದಾರೆ . ಹೂಳು ತುಂಬಿ ನೀರು ಕಾಣದಂತಾಗಿ ತಲ್ಲಣಿಸುತ್ತಿದ್ದ ತಲ್ಲೂರು ಕೆರೆಯೀಗ ಮೈದುಂಬಿ ನಳನಳಿಸುತ್ತಿದೆ

ಕಳೆದ ನಾಲ್ಕು ವರುಷಗಳಿಂದ ಮೈಯೆಲ್ಲಾ ಬರಿದೇ ಹೂಳು ತುಂಬಿಕೊಂಡು ಇನ್ನೇನು ಈ ಕೆರೆಯ ಕಥೆ ಮುಗಿಯಿತು ಎಂಬಂತಾಗಿತ್ತು ತಲ್ಲೂರು ಕೆರೆ. ನೀರಿನ ಅದರಲ್ಲೂ ಕುಡಿಯುವ ನೀರಿನ ಮಹತ್ವ ಅರಿತಿರುವ ಜನಮುಖಿ ನಟ ಯಶ್  ಕೆರೆಗೆ ಕಾಯಕಲ್ಪ ನೀಡಲು ಸಂಕಲ್ಪ ಮಾಡಿದರು . ಅದರಂತೆ ಯಶ್ -ರಾಧಿಕಾ  ಜೊತೆಯಾಗಿಯೇ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿದರು.

ಯಶೋಮಾರ್ಗದ ಮೂಲಕ ಕೆರೆಗೆ ನೀರು ಹರಿಯಲೆಂಬ  ಕಾಯಕಕ್ಕಾಗಿ ನಾಲ್ಕು ಕೋಟಿ ವೆಚ್ಚದಲ್ಲಿ ಹೂಳೆತ್ತುವ ಕಾರ್ಯ ಶುರುವಾದ ಸ್ವಲ್ಪ ದಿನದಲ್ಲೇ ಕೆರೆಯಲ್ಲಿ ನೀರುಕ್ಕಿತ್ತು. ಅದೇ ವೇಳೆಗೆ ವರುಣನ ಕೃಪೆಯು ಸೇರಿ ಮಳೆ ನೀರಿನಿಂದ ಕೆರೆಯೂ ತುಂಬಿ ಸಮೃದ್ಧಿಯ ಸಂಕೇತವಾಗಿದೆ. ಸುತ್ತಲಿನ ಹತ್ತೂರಿನ ಜನ ತಲ್ಲೂರ ಕೆರೆಯ ಉಪಯೋಗ ಪಡೆಯುತ್ತಿದ್ದಾರೆ .

ಅಂದು ಯಶ್ ಇಟ್ಟ ಹೆಜ್ಜೆಗೆ ಜೊತೆಯಾದ ಸುತ್ತ ಮುತ್ತಲ ಊರಿನ ಜನ ಇಂದು ಯಶ್ ರನ್ನ ಸ್ಮರಿಸಿ ಹರಸುತ್ತಿದ್ದಾರೆ . ಅದೇ ಕೃತಜ್ಞತೆಯ ಕಣ್ಣುಗಳಿಂದಲೇ ತುಂಬಿ ತುಳುಕುತ್ತಿರುವ ಕೆರೆಗೆ ಬಾಗಿನ ಅರ್ಪಿಸಲು ತಮ್ಮ ನೀರಿನ ಬವಣೆ ನೀಗಿಸಿದ ಯಶ್ ದಂಪತಿಯನ್ನು ಆಹ್ವಾನಿಸಿದ್ದರು.ಕಷ್ಟಪಟ್ಟು ಸಂಪಾದನೆ ಮಾಡಿದ ಹಣವನ್ನು ಅನ್ನದಾತರ ಕಷ್ಟಕ್ಕೆ ಬಳಸಿದ ಸಂತೃಪ್ತ ಭಾವನೆ ಯಶ್   ದಂಪತಿ ಮುಖದಲ್ಲಿ ಎದ್ದು ಕಾಣುತ್ತಿತ್ತು .

ವೈಮಾನಿಕಾ ವೀಕ್ಷಣೆ ಮಾಡಿದ ಯಶ್ ದಂಪತಿ!
ಬಾಗಿನ ಅರ್ಪಿಸುವುದಕ್ಕೂ ಮೊದಲು ಯಶ್ ದಂಪತಿ ಹೆಲಿಕಾಪ್ಟರ್ ಮೂಲಕ ತುಂಬಿದ ಕೆರೆ ವೀಕ್ಷಣೆ ಮಾಡಿದರು. ಅಭಿಮಾನಿಗಳತ್ತ ಕೈ ಬೀಸಿ ಸಂಭ್ರಮಿಸಿದ್ರು.  ಬಾಗಿನ ಅರ್ಪಿಸಿದ ಬಳಿಕ  ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ರಾಧಿಕಾ ಪಂಡಿತ್, ಕೆರೆ ಹೂಳೆತ್ತುವ ಕೆಲಸ ಕೈಗೆತ್ತಿಕೊಂಡಾಗ ಇಲ್ಲಿನ ವಾತಾವರಣವೇ ಬೇರೆ ಇತ್ತು. ಈಗ ಕೆರೆಯಲ್ಲಿ ನೀರು ತುಂಬಿ ತುಳುಕುತ್ತಿದೆ. ಯಶೋಮಾರ್ಗದ ಕನಸು ನನಸಾಗಿದೆ ಅಂದ್ರು.  ಇದೀಗ ಈ ಪ್ರದೇಶ ಅತ್ಯಂತ ಸುಂದರವಾಗಿದ್ದು, ಸ್ಥಳೀಯರು ಕೆರೆಯನ್ನು ರಕ್ಷಣೆ ಮಾಡಿಕೊಂಡು ಹೋಗಬೇಕು  ಎಂದು ಕರೆ ನೀಡಿದರು.
ಒಳ್ಳೆ ಕೆಲಸವನ್ನು ಎಲ್ಲರೂ ಮಾಡಬೇಕು.
ತೃಪ್ತ ಭಾವದಿಂದ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್, ಏನಾದರೂ ಮಾಡಬೇಕು ಎಂದು ನನಗೆ ಸಣ್ಣ ಆಸೆ ಇತ್ತು. ಕೆರೆಯನ್ನು ಹೂಳೆತ್ತುವಾಗ ಒಂದು ಸಣ್ಣ ಭರವಸೆಯೂ ಇರಲಿಲ್ಲ. ಆದರೆ ರೈತರಿಗೆ ನನ್ನ ಕಡೆಯಿಂದ ಏನಾದರೂ ಮಾಡಬೇಕು ಅನ್ನೋ ಆಸೆ ಮಾತ್ರ ದೃಢವಾಗಿತ್ತು. ಈ ಕೆಲಸದಿಂದ ನನಗೆ ಏನು ಉಪಯೋಗವಿಲ್ಲ. ಜನರಿಗೆ ಸಹಾಯ ಮಾಡಿದ ನೆಮ್ಮದಿಯಿದೆ.  ಆದರೆ, ಇಂತಹ ಮನಸ್ಥಿತಿ ಎಲ್ಲರಲ್ಲಿ ಬರಬೇಕು ಎಂಬುದು ನನ್ನ ಆಸೆ. ಭೂತಾಯಿಗೆ ಒಂದು ಹಿಡಿ ಬಿತ್ತನೆ ಮಾಡಿದರೆ ರಾಶಿ ರಾಶಿ ಕೊಡುತ್ತಾಳೆ. ಒಳ್ಳೆಯ ಮನಸಿನಿಂದ ಏನಾದರೂ ಮಾಡಿದರೆ ಅದು ಒಳ್ಳೆಯದಾಗುತ್ತದೆ ಎನ್ನುವುದಕ್ಕೆ ಈ ಕೆಲಸವೇ ಸಾಕ್ಷಿ ಅಂದ್ರು.. ಫೆಬ್ರವರಿ 28 ರಂದು ಹೂಳೆತ್ತಲು ಶುರು ಮಾಡಿದೆವು, ಶೀಘ್ರದಲ್ಲೇ ಫಲಿತಾಂಶ ಸಿಕ್ಕಿದ್ದು ಖುಷಿ ಕೊಟ್ಟಿದ್ದೆ, ನಾನು ರಾಜಕೀಯಕ್ಕೆ ಬರುವ ಮಾತೇ ಇಲ್ಲ. ಯಶ್ ರಾಜಕೀಯಕ್ಕೆ ಬರಲು ಇಷ್ಟೊಂದು ಕೆಲಸ ಮಾಡ್ತಿದ್ದಾನೆ ಅನ್ನೋ ಮಾತುಗಳು ಕೇಳಿ ಬಂದಿವೆ. ಆದ್ರೆ ನಾನು ರಾಜಕೀಯಕ್ಕೆ ಬರುವುದಾದರೆ ನಮ್ಮ‌ ಊರಿನ ಕಡೆ ಹೋಗ್ತಾ ಇದ್ದೆ . ಕೊಪ್ಪಳಕ್ಕೆ ಯಾಕೆ ಬರ್ತಿದ್ದೆ ಅಂತ ಪ್ರಶ್ನಿಸಿದ್ರು.. ಒಟ್ಟಾರೆ ಯಶ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ .

ಯಶೋಮಾರ್ಗದ ಮೂಲಕ ಯಶ್ ನಡೆದ ಮೊದಲ ಹೆಜ್ಜೆಗೆ ದೊಡ್ಡ ಯಶವೇ ದಕ್ಕಿದೆ . ಮುಂದೆಯೂ ಜಶವೇ ಕೈಹಿಡಿದು ನಡೆಸಲಿ .

-Ad-

Leave Your Comments