ಅಣ್ಣಾವ್ರ ಆ ಸಿನಿಮಾ ನೋಡುತ್ತಿದ್ದರೆ ಈಗಲೂ ಅತ್ತು ಬಿಡ್ತೀನಿ – ಯಶ್

ಕನ್ನಡ ಚಿತ್ರರಂಗದ ಯಶಸ್ವೀ  ನಟರಲ್ಲಿ ಒಬ್ಬರಾಗಿ  ಪ್ರಬುದ್ಧ ಭಾಷೆ , ಅಭಿನಯ , ಸಾಮಾಜಿಕ ಬದ್ಧತೆಯಿಂದ ಮನೆಮಾತಾಗಿರುವ ರಾಕಿಂಗ್ ಸ್ಟಾರ್ ಮನದಲ್ಲಿ ಡಾ . ರಾಜ್ ಕುಮಾರ್ ಹೇಗಿದ್ದಾರೆ ? ಎಂಥಾ ಸ್ಥಾನ ಕೊಟ್ಟಿದ್ದಾರೆ ? ciniadda.com ಜೊತೆ ಹಂಚಿಕೊಂಡಿದ್ದಾರೆ. ಇಕೋ ಓದಿಕೊಳ್ಳಿ .

ನಾನು ಬೆಂಗಳೂರಿಗೆ ಬಂದ ಹೊಸದರಲ್ಲಿ ನಾಗಾಭರಣ ಅವರ ಬೆನಕ ತಂಡದಲ್ಲಿ ಇದ್ದೆ . ಅವರ ಮಗಳ ಮದುವೆಯ ದಿನ ಕಲ್ಯಾಣ ಮಂಟಪದ ಗೆಟ್ ಬಳಿ ಒರಗಿ ನಿಂತು ಬೆನಕ ಕಿಟ್ಟಿ ಜೊತೆ ಮಾತಾಡ್ತಿದ್ದೆ .  ನಾನು ಕಲಾವಿದ ಆಗ್ಬೇಕು ಅಂತ ಮನೆ ಬಿಟ್ಟು ಬಂದಿದ್ರಿಂದ ಇಂಡಸ್ಟ್ರಿ ಸರಿ ಇಲ್ಲಪ್ಪ ,ಇದೆಲ್ಲ ಸರಿಹೋಗಲ್ಲ ಜೀವನ ಕಷ್ಟ ಆಗುತ್ತೆ ಅಂತ ಕಿಟ್ಟಿ ಹೇಳ್ತಾ ಇದ್ರು. ಇದ್ದಕ್ಕಿದ್ದ ಹಾಗೇ ಅವರು ಅಲರ್ಟ್ ಆದ್ರು ನಾನು ಏನಪ್ಪಾ ಅಂತ ಉಲ್ಟಾ ತಿರುಗಿ ನೋಡಿದೆ . ಅಣ್ಣಾವ್ರ ಅಭ್ಯಾಸ ನಿಮಗೆಲ್ಲ ಗೊತ್ತಲ್ಲ . ಸಣ್ಣವರಿರಲಿ ,ದೊಡ್ಡವರಿರಲಿ ಕೈ ಮುಗಿದುಕೊಂಡೇ ಜನರ ಮಧ್ಯೆ ಬರೋವ್ರು. ನಾನು ತಿರುಗಿದ್ದಕ್ಕೂ ಅವ್ರು ಕೈ ಮುಗಿದ್ದಕ್ಕೂ ಅಬ್ಬಾ ಅದೆಂಥ ಘಳಿಗೆ ! ನಾವು ಚಿಕ್ಕಂದಿನಿಂದ ತೆರೆಯಲ್ಲಿ ಮಾತ್ರ ನೋಡಿದ ಮಹಾನ್ ನಟ ಎದುರಿಗೇ ..ವಿನಯವೇ ಮೂರ್ತಿವೆತ್ತಂತೆ ! ಅದೆಂಥ ತೇಜಸ್ಸು ತುಂಬಿದ ಮುಖ!! ನೋಡಿ ಮೈ ಜುಮ್ ಎಂದಿತ್ತು . ನನಗೇ ಅರಿವಿಲ್ಲದಂತೆ ಕೈ ಎತ್ತಿ ಮುಗಿದಿದ್ದೆ .

 

ಅಷ್ಟೂ ಹೊತ್ತು ಚಿತ್ರರಂಗದಲ್ಲಿ ಈಸಿ ಗೆಲ್ಲೋದು ಕಷ್ಟ ಅಂತಿದ್ದವರು ಅಣ್ಣಾವ್ರು ಬಂದು ಹೋದ ಮೇಲೆ ಏನಪ್ಪಾ ರಾಜಣ್ಣನವರೇ ಬಂದು ವೆಲ್ಕಮ್ ಮಾಡಿದಂಗೆ,ಆಶೀರ್ವಾದ  ಮಾಡಿದ ಹಾಗೆ ಆಯ್ತಲ್ಲಪ್ಪಾ ಅಂತ ರೇಗ್ಸಿದ್ರು . ಆ ಕ್ಷಣ ಮರೆಯೋಕೆ ಆಗಲ್ಲ.

ಆ ವಿಷಯದಲ್ಲಿ ನಾನು ಅದೃಷ್ಟವಂತ .ಯಾಕಂದ್ರೆ ಈಗಿನ ಎಷ್ಟೋ ನಟರಿಗೆ ಅವರನ್ನು ನೋಡುವ ಅವಕಾಶವೇ ಸಿಕ್ಕಿಲ್ಲ. ಅದೊಂದು ಭಾಗ್ಯ .

ಅಣ್ಣಾವ್ರ  ನಡಿಗೆಯ ಕಥೆ ..

ನಾನು ಮಾತ್ರವಲ್ಲ ನನ್ನ ಇಡೀ ಕುಟುಂಬವೇ ರಾಜ್ ಕುಮಾರ್ ಅವರನ್ನ ಆರಾಧಿಸುತ್ತೆ. ಅವರ ಬಗ್ಗೆ ಮಾತನಾಡದ ದಿನವೇ ಇಲ್ಲ. ನಾನು ಮೊಗ್ಗಿನ ಮನಸು  ಶೂಟಿಂಗ್ ಮುಗಿಸಿ ಬಂದ ಮೇಲೆ ಅಮ್ಮನ ಬಳಿ ” ಯಾಣದಲ್ಲಿ ನಾಲ್ಕು ಕಿಲೋಮೀಟರ್ ಲಗೇಜ್ ಎಲ್ಲ ಹೊತ್ತುಕೊಂಡು ನಡೆದು ಕೊಂಡು ಹೋದ್ವಿ . ಎಷ್ಟು ಕಷ್ಟ ಆಯ್ತು ಗೊತ್ತಾ ?” ಅಂದೆ. ಕಷ್ಟ ಅಂದಾಗೆಲ್ಲ ನಮ್ಮಮ್ಮ ಒಂದು ಕಥೆ ಹೇಳ್ತಾರೆ. ಅಣ್ಣಾವ್ರು ಆ ಕಾಲದಲ್ಲಿ ಹದಿನಾಲ್ಕು ಕಿಲೋಮೀಟರ್ ನಡ್ಕೊಂಡು ಹೋಗಿದ್ರಂತೆ ನಿಂದ್ಯಾವ್ ಮಹಾ ಬಿಡು ಅಂತಾರೆ . ಅಣ್ಣಾವ್ರು ಯಾವುದೇ ರೀತಿ ನೋಡಿದರು ಬಹಳ ಎತ್ತರದಲ್ಲಿದ್ದಾರೆ . ಅವರೆಲ್ಲಾ  ಬೆಳೆಸಿದ ಚಿತ್ರರಂಗವೆಂಬ ದೊಡ್ಡ ವೃಕ್ಷದಲ್ಲಿ ನಾವೆಲ್ಲಾ ಈಗ ಫಲ ಅನುಭವಿಸುತ್ತಿದ್ದೇವೆ ಅಷ್ಟೇ .

ಆ ಸಿನಿಮಾ ನೋಡಿದ್ರೆ ಈಗಲೂ ಅಳು ಬರುತ್ತೆ 

ನಂಗಂತೂ ಅವರ ಬಬ್ರುವಾಹನ ,  ಮಯೂರ , ಕೃಷ್ಣದೇವರಾಯ ,ಬಹಾದ್ದೂರ್ ಗಂಡು , ಬಂಗಾರದ ಮನುಷ್ಯ ,ಹುಲಿಹಾಲಿನ ಮೇವು ಎಲ್ಲ ಸಿನಿಮಾಗಳು  ಇವತ್ತಿಗೂ ಕಾಡುತ್ತವೆ . ಹಾಸ್ಯ ಪಾತ್ರಗಳು ನಂಗಿಷ್ಟ ಬಂಗಾರದ ಪಂಜರ ಅದೆಷ್ಟು ಸಾರಿ ನೋಡಿದ್ದಿನೋ . ಈಗ್ಲೂ ಬಂದ್ರೆ  ನೋಡ್ಕೊಂಡ್ ಕೂತುಬಿಡ್ತೀನಿ.ಅಷ್ಟು ಇಷ್ಟ ನಂಗೆ ಬಂಗಾರದ ಪಂಜರ . ಸನಾದಿ ಅಪ್ಪಣ್ಣ ನೋಡ್ತಿದ್ರೆ ಈಗಲೂ ಅಳ್ತೀನಿ ನಾನು .

ಅಬ್ಬಾ ನಾವ್ ಮಾಡೋಕೆ ಸಾಧ್ಯವೇ ?

ಬಬ್ರುವಾಹನ ನೋಡಿದ್ರೆ ನನಗೆ ನಾವೆಲ್ಲ ನಟರಾ ? ಅಂತನ್ನಿಸಿಬಿಡುತ್ತೆ . ನಾವೇನೋ ನಮಗೆ ಗೊತ್ತ್ತಿರೋದು ಒಂದಿಷ್ಟು ಮಾಡ್ತಿದ್ದೀವಿ. ಆ ಕಾಲದಲ್ಲೇ ಎರಡೆರಡು ಪಾತ್ರ .ತಂತ್ರಗಾರಿಕೆ , ಅದೇನು ಹಾಡುಗಳು ! ಅದೆಂಥ ಭಾಷೆ !

ಆಳಿದ ಮೇಲೂ ಉಳಿಸಿ ಹೋದದ್ದು 

ಒಬ್ಬ ವ್ಯಕ್ತಿ ಹೇಗಿರಬೇಕು ಅನ್ನೋದನ್ನು ಬದುಕಿ ತೋರಿಸಿದವರು. ನಮ್ಮ ತಂದೆ ತಾಯಿ ಅದರಿಂದ ಪ್ರೇರಣೆ ಪಡೆದವರು . ನಮಗೆ ಚಿಕ್ಕಂದಿನಿಂದ ಅದನ್ನೆಲ್ಲ ಹೇಳ್ತಾನೆ ಬಂದ್ರು . ನಮ್ಮೊಳಗೂ ಸೇರ್ತಾ ಹೋಯ್ತು . ಅಣ್ಣಾವ್ರು ಒಂಥರಾ ಮಾಸ್ ಕೌನ್ ಸಿಲರ್ . ಇಡೀ ಕರ್ನಾಟಕಕ್ಕೆ ಅಷ್ಟೇ ಅಲ್ಲ ಅವರ ಸಿನಿಮಾ ನೋಡುವ,ಹತ್ತಿರದಿಂದ ಅವರನ್ನು ಬಲ್ಲ  ಎಲ್ಲರಿಗು ಹೇಗೆ ಬದುಕಬೇಕು ಅಂತ ತನ್ನ ಇರುವಿಕೆಯಿಂದಲೇ ತೋರಿಬಿಟ್ಟಿದ್ದಾರೆ . ಅವರು ನಮ್ಮ ನಾಡಿನ ಸಂಸ್ಕೃತಿಯ ನೇತಾರ !!

ನಮ್ಮ ರಾಜಾಹುಲಿ ಸಿನಿಮಾದಲ್ಲಿ ಹಂಸಲೇಖ ಒಂದು ಹಾಡು ಬರೆದಿದ್ದಾರೆ “ರಾಜಕುಮಾರೇ ನಮ್ಮ ವಿನಯದ ಗುರುತು “ ಅವರಂತೆ ಬದುಕುವುದು ಬಹಳ ಕಷ್ಟ . ಇಡೀ ಚಿತ್ರರಂಗಕ್ಕೆ ಒಂದು ಮಾದರಿ ಕೊಟ್ಟು ಹೋಗಿದ್ದಾರೆ .ಅವರಿಗೆ ಅವರೇ ಸಾಟಿ .

ಕಲಾತಪಸ್ವಿ 

ನಾವೆಲ್ಲ ಎಲ್ಲಾ ಬೇಕು ಅಂತೀವಿ .ಆದ್ರೆ ಅವರು ಹಾಗಿರಲಿಲ್ಲ ಎಲ್ಲವನ್ನು ತ್ಯಜಿಸಿ ಕಲೆಯನ್ನೇ ಅಪ್ಪಿಕೊಂಡುಬಿಟ್ರೆ . ಪಾತ್ರ ಮಾಡುವುದು ಬಿಟ್ರೆ ಜೀವನದಲ್ಲಿ ತನಗೇನು ಗೊತ್ತಿಲ್ಲ ಎನ್ನುವಂತೆ ಅರ್ಪಿಸಿಕೊಂಡ್ರು . ನಾವಾದ್ರೂ ದೇಶ ಸುತ್ತಬೇಕು , ಇಷ್ಟವಾದದನ್ನ ತಗೋಬೇಕು .ಕಾರು ,ಬಂಗಲೆ ಅಂತೆಲ್ಲ ಆಸೆ ಪಡ್ತೀವಿ ಆದ್ರೆ ಅವ್ರು ಯಾವುದಕ್ಕೂ ಆಸೆ ಪಟ್ಟವರಲ್ಲ . ಎಲ್ಲಾ ಇದ್ದು ಸರಳತೆ ಹೊದ್ದು ಸಂತನಂತೆ ಬದುಕಿದ್ರು.

ನಾನು ಅವರ ಚಿತ್ರಗಳನ್ನು ನೋಡ್ತಿದ್ರೆ ಸಾಮಾನ್ಯ ಪ್ರೇಕ್ಷಕನಾಗಿಬಿಡ್ತೀನಿ.ನೋಡ್ಕಂಡ್ ಎಂಜಾಯ್ ಮಾಡ್ಬಿಡ್ತೀನಿ . ನಾನು ಇಂಥದೊಂದು ಪಾತ್ರ ಮಾಡ್ಬೇಕು ಅಂಥಾ ಯೋಚನೇನೇ ಬರಲ್ಲ . ಅದರ ಮಧ್ಯೆಯೂ ನನ್ನೊಳಗಿನ ಕಲಾವಿದನನ್ನ ಬಡಿದೆಬ್ಬಿಸುವ ಪಾತ್ರ ಅಂದ್ರೆ ಮಯೂರ .

ಅದು ಮಾತ್ರ ಸ್ವಾಭಿಮಾನ ಕೆರಳಿಸುವಂಥಾದ್ದು. ಮಯೂರ ಚಿತ್ರಕಥೆಯನ್ನು ಗಮನಿಸಿ ಅದನ್ನು ಆಧಾರವಾಗಿಟ್ಟುಕೊಂಡೇ, ಸ್ಫೂರ್ತಿಯನ್ನು ಪಡೆದೇ  ಬಾಹುಬಲಿ ಅಂಥಾ ಸಿನಿಮಾಗಳು ಬಂದಿವೆ.  ಒಟ್ಟಿನಲ್ಲಿ ಅಣ್ಣಾವ್ರು ಮತ್ತವರ ಸಿನಿಮಾಗಳು ಕನ್ನಡಕ್ಕೆ ಮಾತ್ರವಲ್ಲ ಭಾರತೀಯ ಚಿತ್ರರಂಗಕ್ಕೇ ಮಾದರಿ .

 

-Ad-

Leave Your Comments