ಯೋಗರಾಜ್ ಭಟ್ – ಗಣೇಶ್ ಜೋಡಿಯ “ಮುಗುಳುನಗೆ”

ಕನ್ನಡ ಚಿತ್ರರಂಗದಲ್ಲಿ ದಾಖಲೆ ಬರೆದ “ಮುಂಗಾರುಮಳೆ”ಯನ್ನು ಜನರಿನ್ನೂ ಮರೆತಿಲ್ಲ. ಗಣೇಶ್ ‘ಗೋಲ್ಡನ್ ಸ್ಟಾರ್’ ಪಟ್ಟಕ್ಕೇರಲು ನಾಂದಿ  ಹಾಡಿದ ಸಿನಿಮಾವಿದು. ಯೋಗರಾಜ್ ಭಟ್ ಹಾಡಿನ ಮಳೆಯಲ್ಲಿ ನೆನೆದಷ್ಟು ಸುಖ ಅಭಿಮಾನಿಗಳಿಗೆ. ಎಷ್ಟೇ ಏಳು -ಬೀಳು ಆದರೂ ಬಡಪೆಟ್ಟಿಗೆ ಸೋಲುವ ತಲೆಯಲ್ಲ ಭಟ್ಟರದ್ದು. ಸಿನಿಮಾ ಪ್ರೀತಿಯಿಂದ, ಶ್ರದ್ದೆಯಿಂದ ಕೆಲಸ ಮಾಡುವ ಹೊಸ ನಿರ್ದೇಶಕರ ಪ್ರೋತ್ಸಾಹಕ್ಕೆ  ಭಟ್ಟರು ಸದಾ ಸಿದ್ದ ಅನ್ನುವ ಅನಿಸಿಕೆ ಹೊಸ ತಲೆಮಾರಿನ ಅನೇಕರದ್ದು. ಈಗ ಅವರ ಹಳೆಯ ಜೋಡಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ “ಮುಗುಳುನಗೆ” ಯೊಂದಿಗೆ ಬರಲು ತಯಾರಾಗುತ್ತಿದ್ದಾರೆ.

ಯಶಸ್ ಫಿಲ್ಮ್ ,ಯೋಗರಾಜ್ ಮೂವೀಸ್, ಗೋಲ್ಡನ್ ಮೂವೀಸ್ ಜಂಟಿ ನಿರ್ಮಾಣದಲ್ಲಿ ತಯಾರಾಗುತ್ತಿದೆ “ಮುಗುಳುನಗೆ “.ಸಲಾಂ ಈ ಚಿತ್ರದ ಪ್ರಮುಖ ನಿರ್ಮಾಪಕರು.

“ಮುಗುಳುನಗೆ”ಗೆ ಮೂವರು ನಾಯಕಿಯರು

ganeshamulya 

ನಾಯಕ ನಟನಾಗಿ ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರದಲ್ಲಿದ್ದಾರೆ .ಜನಪ್ರಿಯ ನಟಿ ಅಮೂಲ್ಯ, ಆಶಿಕಾ (‘ಕ್ರೇಜಿ ಬಾಯ್’ ನಾಯಕಿ )ನಿಖಿತಾ ನಾರಾಯಣ್ (‘ಮಡಮಕ್ಕಿ’ ನಾಯಕಿ ) ನಾಯಕಿಯರು

ಚಿತ್ರದ ಪ್ರತಿ ಪಾತ್ರವು ನಗುವಿನಲ್ಲೇ ತೊಡಗಿರುವಂತೆ ಚಿತ್ರಕಥೆ ಹೆಣೆದಿದ್ದಾರೆ ಭಟ್ಟರು ಎಂಬ ಮಾತುಗಳು ಕೇಳಿಬಂದಿವೆ. ಅನಂತ್ ನಾಗ್ ,ಅಚ್ಯುತ್ ಕುಮಾರ್ ಹಾಗು ಇನ್ನಿತರರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ .

ಕಳೆದ ಡಿಸೆಂಬರ್ 9 ರಂದು ಬೊಮ್ಮನಹಳ್ಳಿಯ ಪಂಚಮುಖಿ ದೇವಸ್ಥಾನದಲ್ಲಿ ಬೆಳಿಗ್ಗೆ 6.30ಕ್ಕೆ ಪ್ರಥಮ ದೃಶ್ಯ ಚಿತ್ರೀಕರಿಸಲಾಗಿದೆ. ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಉತ್ತರಕನ್ನಡ ಅಲ್ಲದೆ ಪಾಂಡಿಚೇರಿ ಮುಂತಾದ ಕಡೆಗಳಲ್ಲಿ ಚಿತ್ರೀಕರಣದ ಯೋಜನೆ ಸಿದ್ಧಪಡಿಸಿಕೊಳ್ಳಲಾಗಿದೆ.

ವಿ ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ 5 ಹಾಡುಗಳು ಕೇಳುಗರ ಕಿವಿಗೆ ಹಬ್ಬ ಮಾಡೋದಿಕ್ಕೆ ಸಿದ್ಧವಾಗುತ್ತಿದೆ. ಸುಜ್ಞಾನಮೂರ್ತಿ  ಛಾಯಾಗ್ರಹಣ “ಮುಗುಳುನಗೆ” ಚಿತ್ರಕ್ಕಿದೆ.

ಕೊಟ್ಟ ಕಾಸಿಗೆ ಮೋಸವಿಲ್ಲ .ಭರ್ಜರಿ ಮಜಾ .. ಬೊಂಬಾಟ್ ಪಿಕ್ಚರ್ ಅನ್ನಿಸುವಂತೆ ಮೋಡಿ ಮಾಡಲಿ ಭಟ್ಟರ “ಮುಗುಳುನಗೆ”.

 

-Ad-

Leave Your Comments